ಮನಸ್ಸು ಚಂಚಲವೆಂದು ನಾ ಹೀಗಾದೆನೋ?
ನಾನೇ ಹೀಗೆಂದು ಮನಸ್ಸು ಚಂಚಲವಾಯಿತೋ?
ಪ್ರೀತಿಯ ಮರದಲ್ಲಿ ಮಂಗನಂತಾಗಿರುವೆ ನಾನು
ಈ ಕೊಂಬೆಯೂ ಚೆಂದ, ಆ ಕೊಂಬೆಯೂ ಅಂದ
ಹೂಬನದಿ ಮರುಳಾದ ದುಂಭಿ ನಾನು
ಯಾವ ಹೂವನು ತೊರೆದು, ಯಾವುದನು ಚುಂಬಿಸಲಿ
ಮಲ್ಲಿಗೆಯ ಅಪ್ಪಿದರೆ ಸಂಪಿಗೆಗೆ ಕೋಪ
ಎರಡೂ ಸಿಕ್ಕರೆ, ನನಗೆ ಸೇವಂತಿಯದೇ ಙ್ಞಾಪಕ
ಹರೆಯವ ರೂಪಿಸುವುದ ಪ್ರಕೃತಿಗೆ ಬಿಟ್ಟೆ
ಹರೆಯದಿ ಮನಸ್ಸು ಮಾತ್ರ ಮಗುವಿನಂತೆ ಇಟ್ಟೆ
ಅಂಗಡಿಯಲಿ ನಾಲ್ಕಾಣೆ ಹಿಡಿದ ಮಗುವಿನಂತೆ ನಾನು
ಎಟುಕಲಿ-ಇರದಿರಲಿ, ಎಲ್ಲ ತಿಂಡಿಯನೂ ಸವಿಯುವಾಸೆ
ತಿಳಿಯದ ಈ ಮನಸ್ಸಿಗೆ, ಕಬ್ಬಿಣವ ತುಂಬಿದೆ
ಅಯಸ್ಕಾಂತದಂತೆ ಚೆಲುವೆಯರ ಎಲ್ಲೆಲ್ಲೂ ಸೃಷ್ಟಿಸಿದೆ
ಯಾರನ್ನು ಅಪ್ಪಲಿ, ಯಾರಿಂದ ದೂರವಿರಲಿ
ವಯಸ್ಸಿನ ಮನಸ್ಸಿಗೆ ಎಲ್ಲವೂ ಆಕರ್ಷಕವೆ !
ಎಲ್ಲರನೂ ಸಮನಾಗಿ ನೀ ಸೃಷ್ಟಿಸಿ ಸಿಂಗರಿಸಿರುವಾಗ
ಒಬ್ಬಳು ಸರಿಯೆಂದು ಮತ್ತೊಬ್ಬಳ ಬಿಡುವುದು ಸರಿಯೇ?
ಎಲ್ಲರಿಗೂ ಪ್ರೀತಿ ಹಂಚಿರೆಂದು ನೀ ಸಾರುವಾಗ
ನಿನ್ನ ಭಕ್ತನಾದ ನಾನು, ಭೇದ ಮಾಡುವುದು ಸರಿಯೇ?
ಉರಿಯುವ ದೀಪಕ್ಕೆ ಕತ್ತಲೆಯಲ್ಲಿ ಭೇದ ಕಾಣದು
ಗುಡಿಗೂ ಅಲಂಕಾರವೇ, ಮಸಣಕ್ಕೂ ದಾರಿದೀಪವೇ,
ನನ್ನೀ ಮನಸ್ಸಿನ ಬತ್ತಿಗೆ, ನೀ ಪ್ರೀತಿ ಹಚ್ಚಿದಾಗ
ಒಬ್ಬಳೆಡೆಗೆ ಮಾತ್ರ ಬೆಳಕನ್ನು ಚೆಲ್ಲುವುದು ಸರಿಯೇ?
ಪ್ರೀತಿಯ ಜಾತ್ರೆಯಲ್ಲಿ ದಾರಿ ತಪ್ಪಿದ ಬಾಲಕ ನಾನು
ನನ್ನ ಕೈ ಹಿಡಿದು ನೀ ನಡೆಸು ಮುಂದೆ,
ಸಾವಿರದ ಲೆಕ್ಕದಲಿ ಸರಸವಾಡಿದವನು ನೀನು
ಒಂದೆರಡು ಪಾಠವ ನನಗೂ ಕಲಿಸಿಕೊಡು ತಂದೆ !!
No comments:
Post a Comment