Saturday, September 22, 2012

ಆಸೆ

ನಿನ್ನ ಬೆರಳುಗಳ ಕಂಡಾಗ , ವೀಣೆಯಾಗುವ ಬಯಕೆ
ಪ್ರೀತಿಯಿಂದ ಎನ್ನ ನೀನು ನುಡಿಸಬಾರದೇಕೆ ?
ಬಹುದಿನದಿ ಮನದಲ್ಲೇ ಕೂಡಿಟ್ಟ ಬಯಕೆಗಳ
ಪ್ರೇಮರಾಗದಿ ನಿನಗೆ ಅರ್ಪಿಸುವ ಆಸೆ

ಕಂಗಳ ಕಂಡಾಗ ಕನಸಾಗುವ ಆಸೆ
ರೆಪ್ಪೆಗಳ ಅಂಚಿನಲ್ಲೇ ಜೀವ ಕಳೆಯುವ ಆಸೆ
ನೀ ಪ್ರತಿಬಾರಿ ಮೈಮರೆತು ಕುಂತಾಗಲೂ
ಸುಂದರ ಜಗವೊಂದನು ನಿನಗಾಗಿ ಹೆಣೆಯುವ ಆಸೆ

ತುಟಿಗಳ ಕಂಡಾಗ ಹೂವಾಗುವ ಬಯಕೆ
ಸೊಂಪಾದ ಪರಿಮಳದಿ ನಿನ್ನ ತೇಲಿಸುವ ಆಸೆ
ಒಂದೇ ದಿನದಿ ಬದುಕಿ ಬಾಡಿದರೆನು
ನೀ ನಕ್ಕು ಚುಂಬಿಸಲು, ನಾ ಪ್ರತಿದಿನ ಸಾಯಲೂ ಸರಿಯೆ

ಬಳುಕುವ ಸೊಂಟವ ಕಂಡಾಗ ಬಿಂದಿಗೆಯಾಗುವ ಆಸೆ
ಊರೆಲ್ಲಾ ನಿನ್ನೊಡನೆ ಕುಲುಕುತ ನಡೆಯುವ ಆಸೆ
ಎನ್ನ ನೀ ಬಿಗಿದಪ್ಪಿ ನಡೆಯುವ ಅನುಭವಕೆ
ಜೀವನವೆಲ್ಲಾ ಜೀವವಿಲ್ಲದೆ ಇದ್ದರೂ ಸರಿಯೆ!

ನಿನ್ನ ಪ್ರತಿಸಾರಿ ಕಂಡಾಗಲೂ ಎನಾದರೊಂದಾಗುವಾಸೆ
ಸದಾ ನಿನ್ನೊಡನೆ ನೆರಳಂತೆ ಇರುವಾಸೆ
ನನ್ನ ಜಗವೆಲ್ಲಾ ನಿನ್ನದೇ ಬಿಂಭವಾಗಿರುವಾಗ
ನಿನ್ನ ಮನದೊಳಗೆ ನನಗೊಂದು ಪುಟ್ಟ ಜಾಗ ಕೊಡಬಾರದೇಕೆ?

No comments:

Post a Comment