Thursday, September 13, 2012

ಬಿಳಿ ಕೂದಲು

ಕಾರ್ಮೋಡಗಳ ನಡುವೆ ಮಿಂಚೊಂದು ಹರಿದಂತೆ
ಬಿಳಿಯ ಕೂದಲೊಂದು ಎದ್ದು ಕಾಣುತಿದೆ
ಜೀವನದ ಮಧುರವಾದ ಘಟ್ಟವು ಮುಗಿಯಿತೆಂದು
ಕಾಲವು ತನ್ನದೇ ರೀತಿಯಲ್ಲಿ ಸೂಚಿಸುತಿದೆ

ನನ್ನ ಮನಸನ್ನೇ ಪ್ರತಿಬಿಂಭಿಸುತ್ತಿದ್ದ ಕನ್ನಡಿಯು
ಇಂದು ಸತ್ಯವ ತೆರೆದಿಡಲು ನಿರ್ಧರಿಸಿದೆ
ಮುಂದೊಂದು ದಿನ ಹೀಗಾಗುವುದೆಂದು ತಿಳಿದಿದ್ದರೂ
ಅದನ್ನು ಇಂದೇ ಅರಿಯಲು ಕಸಿವಿಸಿಯಾಗಿದೆ

ಇದುವರೆಗೂ ಚೆಂದವಾಗಿ ಕಂಡಂತ ಮೊಗದಲ್ಲಿ
ಇದ್ದಕ್ಕಿದ್ದಂತೆ ನೆರಿಗೆಗಳು ಎದ್ದು ಕಾಣುತಿವೆ
ಮನಸ್ಸಿನ ಕಣ್ಣಿಗೆ ಅಂಟಿದ್ದ ಪೊರೆಯನ್ನು
ಬಿಳಿಯ ಕೂದಲೆಳೆಯೊಂದು ಕಿತ್ತುಹಾಕಿದೆ

ಕನ್ನಡಿಯನ್ನೇ ಧಿಟ್ಟಿಸುತ್ತಾ ವಯಸ್ಸನ್ನು ಲೆಕ್ಕ ಹಾಕಿದೆ
ಇಷ್ಟು ಬೇಗನೇಕೆ ಬಿಳಿಕೂದಲೆಂದು ಯೋಚಿಸಿದೆ
ಮಕ್ಕಳಾದರೂ ಮದುಮಗನಂತೆ ಇದ್ದ ನನಗೆ
ಯಕಶ್ಚಿತ್ ಕೂದಲೊಂದು ವಯಸ್ಸಾಯಿತೆಂದು ಕೂಗಿ ಹೇಳಿದೆ

ಕತ್ತರಿಸಿ ಪ್ರಯೋಜನವಿಲ್ಲ, ಮತ್ತಷ್ಟು ಹುಟ್ಟುವುದು
ಬಣ್ಣ ಹಚ್ಚಿ ಕಪ್ಪಾಗಿಸಬಹುದು, ಆದರೆ ಶಾಶ್ವತವಲ್ಲ..
ಕಾಲಕ್ಕೆ ಎದುರಾಗಿ, ಇನ್ನೂ ಯೌವನದಲ್ಲಿರುವ ಮನಸ್ಸು
ಈ ಕೂದಲುಗಳನ್ನೇಕೆ ಕಾಲದ ವಶದಿಂದ ಉಳಿಸಲಿಲ್ಲ?
  

No comments:

Post a Comment