Monday, November 14, 2011

ನನ್ನಾಕೆ

ಬೇಟೆಗಾರನ ಕಂಡು ಹೆದರಿದ ಹರಿಣಿಯಂತೆ
ನಿನ್ನ ಕಂಗಳು ಎನ್ನ ಕಂಡು ಹೆದರುತಿವೆಯೇಕೆ,
ಆ ಕಂಗಳಲ್ಲಿ ಕಲೆತು ಹೋಗಿರುವ ಎನ್ನೆದೆಯು
ನಿನಗಾಗಿ ಉಸಿರಾಡುವುದು ನಿನಗೆ ತಿಳಿಯದೇಕೆ.....



 ಎನ್ನ ಕಂಡು ನಸುನಾಚಿ ನಿಂತ ನೀರೆ
ಎನ್ನೆಡೆಗೆ ಬರಲು ಮನದಿ ಸಂಕೋಚವೇಕೆ,
ಒಳ ಕೋಣೆ ಕದವ ಬಳ್ಳಿಯಂತಪ್ಪಿದವಳೆ
ಕದ ತೆರೆದು ಬಳಿ ಬರಲು ಆ ತವಕವೇಕೆ.....



 ನಾನಿರುವಾಗ ಎನ್ನೆಡೆಗೆ ತಿರುಗದ ಆ ಕಂಗಳು
ನಾ ಬರಲು ತಡವಾದರೆ ಹೆದರಿ ನಡುಗುವುದೇಕೆ,
ನಾನಿರದಾಗ ನನ್ನರುಸುವ ಆ ಕಂಗಳು
ನಿನ್ನೆದುರು ಬಂದಾಗ, ಕಣ್ಣಾಮುಚಾಲೆಯಾಡುವುದೇಕೆ.......


 ನಾಚಿಕೆಯೇ ರೂಪ ಹೊತ್ತು ನಿಂತಂತೆ
ನಿನ್ನ ಮೊಗವು ಕೆಂದಾವರೆಯಂತೆ ಅರಳಿರುವುದೇಕೆ,
ನಿನ್ನರಸಿ ಬಹುದೂರ ಬಂದಿರುವ ಈ ದುಂಭಿಗೆ
ಕಾಯಿಸಿ ಖುಶಿ ಪಡುವ ಆಸೆ, ಕಮಲೆ ನಿನಗೇಕೆ..........


 ಧರೆಯ ರಹಸ್ಯವೆಲ್ಲಾ ಒಳಗೆ ಬಚ್ಚಿಟ್ಟ ಹಾಗೆ
ಆ ನಿನ್ನ ತುಟಿಗಳು ಪರಸ್ಪರ ಅಪ್ಪಿವೆಯೇಕೆ,
ನಿನ್ನೆದೆಯ ಬಾಗಿಲಲಿ ನಿಂತಿರುವ ಎನ್ನೊಡನೆ
ತುಟಿ ಬಿಚ್ಚಿ ಸ್ವರಧಾರೆ ಹರಿಸಲು ನಾಚಿಕೆಯೇಕೆ.......


 ಮನದೊಳೆನಗೆ ಕವಿತೆ ಬರೆದು ಹಾಡುವ ನೀರೆಯೆ
ಎನ್ನೊಡನಿರುವಾಗ ಬಾನಂಚಿನ ಈ ಮೌನವೇಕೆ,
ಮನದೊಳಗೆ ಬಂದಿಸಿಹ ಪ್ರೀತಿಯ ಹಕ್ಕಿಗಳ
ಬಾಯ್ತೆರೆದು ಎನ್ನೆಡೆಗೆ, ಕೊಂಚ ಹಾರಿಸಬಾರದೇಕೆ......


 ಮೌನದಾ ಮಳೆಯಲ್ಲಿ ಮಿಂದಿರುವೆ ನಾನು
ಮಾತಿನಾ ಸೆರಗಿನಲ್ಲಿ ನನ್ನೊರೆಸಬಾರದೇಕೆ,
ಚೆಲುವೆ, ನಾ ಹೊರಟು ನಿಂತಿರುವೆ
ನನ್ನೊಡನೆ ಕುಳಿತು ನೀ ತುಸು ಮಾತಾಡಬಾರದೇಕೆ.......


 ಬಾಗಿಲೆಡೆಗೆ ತೆರಳಲು ನಾನೆದ್ದು ನಿಂತಾಗ
ಬಾಯ್ತೆರೆದು ನನಗಾಗಿ ನಸುನಾಚಿ ನುಡಿದಳಾಕೆ,
ಕಾತುರದಿ ನನ್ನ ನೋಡಿ, ಧರೆಯೆಡೆಗೆ ಮುಖ ಮಾಡಿ
"ಮತ್ತೆಂದು ಬರುವಿರಿ?" ಎಂದೆನ್ನ ಕೆಳಿದಳಾಕೆ........

No comments:

Post a Comment